Add parallel Print Page Options

ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ

(ಮಾರ್ಕ 4:1-9; ಲೂಕ 8:4-8)

13 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು. ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು. ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:

“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು. ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು. ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ. ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು. ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು. ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”

Read full chapter