Add parallel Print Page Options

ಯೇಸುವಿನಿಂದ ಗುಣಹೊಂದಿದ ಪಾರ್ಶ್ವವಾಯು ರೋಗಿ

(ಮತ್ತಾಯ 9:1-8; ಮಾರ್ಕ 2:1-12)

17 ಒಂದು ದಿನ ಯೇಸು ಜನರಿಗೆ ಬೋಧಿಸುತ್ತಿದ್ದನು. ಫರಿಸಾಯರು ಮತ್ತು ಧರ್ಮೋಪದೇಶಕರು ಸಹ ಅಲ್ಲಿ ಕುಳಿತುಕೊಂಡಿದ್ದರು. ಅವರು, ಗಲಿಲಾಯದಿಂದಲೂ ಜುದೇಯ ಪ್ರಾಂತ್ಯದ ಊರುಗಳಿಂದಲೂ ಜೆರುಸಲೇಮಿನಿಂದಲೂ ಬಂದಿದ್ದರು. ರೋಗಿಗಳನ್ನು ಗುಣಪಡಿಸಲು ಪ್ರಭುವಿನ ಶಕ್ತಿಯು ಆತನಲ್ಲಿತ್ತು. 18 ಒಬ್ಬ ಪಾರ್ಶ್ವವಾಯು ರೋಗಿ ಅಲ್ಲಿದ್ದನು. ಒಂದು ಚಿಕ್ಕ ಹಾಸಿಗೆಯಲ್ಲಿ ಅವನನ್ನು ಕೆಲವು ಮಂದಿ ಗಂಡಸರು ಹೊತ್ತುಕೊಂಡು ಬಂದು ಯೇಸುವಿನ ಮುಂದೆ ಇಡಲು ಪ್ರಯತ್ನಿಸಿದರು. 19 ಆದರೆ ಅಲ್ಲಿ ಬಹಳ ಜನ ಇದ್ದುದರಿಂದ ಯೇಸುವಿನ ಬಳಿಗೆ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಮನೆಯ ಮೇಲೆ ಹತ್ತಿ ಹೆಂಚುಗಳನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. 20 ಈ ಜನರ ನಂಬಿಕೆಯನ್ನು ನೋಡಿ ಯೇಸು ಆ ರೋಗಿಗೆ, “ಸ್ನೇಹಿತನೇ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

21 ಯೆಹೂದ್ಯ ಧರ್ಮೋಪದೇಶಕರು ಮತ್ತು ಫರಿಸಾಯರು, “ಈ ಮನುಷ್ಯನು (ಯೇಸು) ಯಾರು? ಈತನು ದೇವರಿಗೆ ವಿರುದ್ಧವಾದ ಸಂಗತಿಗಳನ್ನು ಹೇಳುತ್ತಾನಲ್ಲಾ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಬಲ್ಲನು” ಎಂದು ತಮ್ಮತಮ್ಮೊಳಗೆ ಯೋಚಿಸಿದರು.

22 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ನೀವು ಆ ರೀತಿ ಯೋಚಿಸುವುದೇಕೆ? 23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಪಾರ್ಶ್ವವಾಯು ರೋಗಿಗೆ ಹೇಳುವುದೋ? ಅಥವಾ ‘ಎದ್ದುನಿಂತು ನಡೆ’ ಎನ್ನುವುದೋ? 24 ಆದರೆ ಮನುಷ್ಯಕುಮಾರನಿಗೆ[a] ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರ ಉಂಟೆಂಬುದು ನಿಮಗೆ ಖಚಿತವಾಗಬೇಕು” ಎಂದು ಹೇಳಿ, ಪಾರ್ಶ್ವವಾಯು ರೋಗಿಗೆ, “ಏಳು! ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ಮನೆಗೆ ಹೋಗು!” ಎಂದು ಹೇಳಿದನು.

25 ಆ ಕೂಡಲೇ ಅವನು ಜನರು ಮುಂದೆ ಎದ್ದುನಿಂತು, ತನ್ನ ಹಾಸಿಗೆಯನ್ನು ಹೊತ್ತುಕೊಂಡು ದೇವರನ್ನು ಸ್ತುತಿಸುತ್ತಾ ಮನೆಗೆ ಹೋದನು. 26 ಜನರೆಲ್ಲರೂ ಬಹಳ ಆಶ್ಚರ್ಯಪಟ್ಟು ದೇವರನ್ನು ಸ್ತುತಿಸತೊಡಗಿದರು ಮತ್ತು ದೇವರಲ್ಲಿ ಭಯಭಕ್ತಿಯುಳ್ಳವರಾಗಿ, “ಈ ದಿನ ನಾವು ಆಶ್ಚರ್ಯಕರವಾದ ಸಂಗತಿಯನ್ನು ಕಂಡೆವು!” ಎಂದರು.

Read full chapter

Footnotes

  1. 5:24 ಮನುಷ್ಯಕುಮಾರನು ಯೇಸು. ದಾನಿ. 7:13-14ರಲ್ಲಿ ದೇವರು ತನ್ನ ಜನರನ್ನು ರಕ್ಷಿಸಲು ಆರಿಸಿಕೊಂಡ ಮೆಸ್ಸೀಯನಿಗೆ ಈ ಹೆಸರು ಕೊಡಲಾಗಿದೆ.