Add parallel Print Page Options

ಉರಿಯುವ ಪೊದೆ

ಮೋಶೆಯ ಮಾವನ ಹೆಸರು ಇತ್ರೋನನು. ಇತ್ರೋನನು ಮಿದ್ಯಾನಿನ ಯಾಜಕನಾಗಿದ್ದನು. ಮೋಶೆಯು ಇತ್ರೋನನ ಕುರಿಗಳಿಗೆ ಕುರುಬನಾಗಿದ್ದನು. ಒಂದು ದಿನ, ಮೋಶೆಯು ಕುರಿಗಳನ್ನು ಮರುಭೂಮಿಯ ಪಶ್ಚಿಮಭಾಗಕ್ಕೆ ನಡೆಸಿಕೊಂಡು ದೇವರ ಬೆಟ್ಟವೆಂದು ಕರೆಯಲ್ಪಡುವ ಸೀನಾಯಿ ಎಂಬ ಹೋರೇಬ್ ಬೆಟ್ಟಕ್ಕೆ ಹೋದನು. ಆ ಬೆಟ್ಟದಲ್ಲಿ ಯೆಹೋವನ ದೂತನು ಮೋಶೆಗೆ ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡನು.

ಪೊದೆಯು ಉರಿಯುತ್ತಿದ್ದರೂ ಸುಟ್ಟು ಹೋಗದಿರುವುದನ್ನು ಮೋಶೆ ಗಮನಿಸಿದನು. ಪೊದೆಯು ಉರಿಯುತ್ತಿದ್ದರೂ ಸುಟ್ಟುಹೋಗದಿರುವುದಕ್ಕೆ ಕಾರಣವೇನೆಂದು ತಿಳಿದುಕೊಳ್ಳಲು ಮೋಶೆಯು ಪೊದೆಯ ಸಮೀಪಕ್ಕೆ ಹೋಗತೊಡಗಿದನು.

ಮೋಶೆಯು ಪೊದೆಯನ್ನು ನೋಡಲು ಬರುತ್ತಿರುವುದನ್ನು ಯೆಹೋವನು ನೋಡಿದನು. ದೇವರು ಆ ಪೊದೆಯೊಳಗಿಂದ, “ಮೋಶೆ, ಮೋಶೆ!” ಎಂದು ಕರೆದನು.

ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು.

ಆಗ ಯೆಹೋವನು, “ಇನ್ನೂ ಹತ್ತಿರ ಬರಬೇಡ. ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ. ನಾನು ನಿನ್ನ ಪೂರ್ವಿಕರ ದೇವರು, ನಾನು ಅಬ್ರಹಾಮನ ದೇವರು, ನಾನು ಇಸಾಕನ ದೇವರು, ನಾನು ಯಾಕೋಬನ ದೇವರು” ಎಂದು ಹೇಳಿದನು.

ದೇವರನ್ನು ನೋಡುವುದಕ್ಕೆ ಭಯಪಟ್ಟು ಮೋಶೆ ತನ್ನ ಮುಖವನ್ನು ಮುಚ್ಚಿಕೊಂಡನು.

ಆಗ ಯೆಹೋವನು, “ನನ್ನ ಜನರು ಈಜಿಪ್ಟಿನಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿದ್ದೇನೆ. ಅಧಿಕಾರಿಗಳು ಅವರನ್ನು ಹಿಂಸಿಸುವಾಗ ಅವರು ಇಟ್ಟ ಮೊರೆಯನ್ನು ಕೇಳಿದ್ದೇನೆ. ಅವರ ದುಃಖವನ್ನೆಲ್ಲಾ ಬಲ್ಲೆನು. ಈಗ ನಾನು ಇಳಿದುಹೋಗಿ ಈಜಿಪ್ಟಿನವರಿಂದ ನನ್ನ ಜನರನ್ನು ರಕ್ಷಿಸುವೆನು. ನಾನು ಅವರನ್ನು ಆ ದೇಶದಿಂದ ಬಿಡುಗಡೆ ಮಾಡಿ ಒಳ್ಳೆಯದಾದ ಮತ್ತು ವಿಶಾಲವಾದ ದೇಶಕ್ಕೆ ಅವರನ್ನು ನಡೆಸುವೆನು. ಅದು ಸಮೃದ್ಧಿಕರವಾದ ದೇಶ.[a] ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸವಾಗಿರುವ ದೇಶ ಅದಾಗಿದೆ. ನಾನು ಇಸ್ರೇಲರ ಮೊರೆಯನ್ನು ಕೇಳಿದ್ದೇನೆ. ಈಜಿಪ್ಟಿನವರು ಅವರಿಗೆ ಕೊಡುವ ಹಿಂಸೆಯನ್ನು ನೋಡಿದ್ದೇನೆ. 10 ಆದ್ದರಿಂದ ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತಿದ್ದೇನೆ. ಹೋಗು! ನನ್ನ ಜನರಾದ ಇಸ್ರೇಲರನ್ನು ಈಜಿಪ್ಟಿನಿಂದ ಬಿಡುಗಡೆ ಮಾಡು!” ಎಂದು ಹೇಳಿದನು.

11 ಅದಕ್ಕೆ ಮೋಶೆಯು ಯೆಹೋವನಿಗೆ, “ನಾನು ಮಹಾ ವ್ಯಕ್ತಿಯೇನಲ್ಲ! ಫರೋಹನ ಸನ್ನಿಧಾನಕ್ಕೆ ಹೋಗುವುದಕ್ಕೂ ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬರುವುದಕ್ಕೂ ನಾನೆಷ್ಟರವನು?” ಎಂದು ಹೇಳಿದನು.

12 ಅದಕ್ಕೆ ದೇವರು “ನೀನು ಇದನ್ನು ಮಾಡಬಹುದು; ಯಾಕೆಂದರೆ ನಾನೇ ನಿನ್ನೊಂದಿಗೆ ಇರುವೆನು. ನಿನ್ನನ್ನು ಕಳುಹಿಸಿದವನು ನಾನೇ ಎಂಬುದಕ್ಕೆ ಇದೇ ಸಾಕ್ಷಿಯಾಗಿರುವುದು. ನೀನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಮೇಲೆ, ನೀವು ಈ ಬೆಟ್ಟದ ಬಳಿ ನನ್ನನ್ನು ಆರಾಧಿಸುವಿರಿ” ಎಂದು ಹೇಳಿದನು.

Read full chapter

Footnotes

  1. 3:8 ಅದು … ದೇಶ ಅಕ್ಷರಶಃ, “ಹಾಲೂ ಜೇನೂ ಹರಿಯುವ ದೇಶ.”